Skip to main content
ಸಿಂಧೂರ ಭಾರತ
News

ಜಾಜಿರಕಲ್ಲು ಟೋಲ್ ಬಳಿ ಭೀಕರ ಅಪಘಾತ; ಡಿಕ್ಕಿಯ ಬಳಿಕ ಹೊತ್ತಿ ಉರಿದ ಎರಡು ಲಾರಿಗಳು

11 Jun 2026

ಬಳ್ಳಾರಿ, : ಆಂಧ್ರ ಪ್ರದೇಶ ಗಡಿಭಾಗದ ಜಾಜಿರಕಲ್ಲು ಟೋಲ್ ಪ್ಲಾಜಾ ಸಮೀಪ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾಗಿವೆ.


ಬಳ್ಳಾರಿ–ಡಿ. ಹಿರೇಹಾಳ್ ಸಂಪರ್ಕ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಲಾರಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲೇ ಎರಡೂ ಲಾರಿಗಳನ್ನು ಆವರಿಸಿಕೊಂಡು, ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಲಾರಿಗಳಲ್ಲಿ ಒಂದರಲ್ಲಿ ಸಿಮೆಂಟ್ ಸಾಗಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.


ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡರು. ಅಗ್ನಿಶಾಮಕ ಸಿಬ್ಬಂದಿ ಸಾಕಷ್ಟು ಸಮಯದ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.


ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ಸಾಲು ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸಂಚಾರವನ್ನು ಸುಗಮಗೊಳಿಸಿದರು.


ಅಪಘಾತದ ನಿಖರ ಕಾರಣ, ಸಂಭವಿಸಿದ ಹಾನಿಯ ಪ್ರಮಾಣ ಹಾಗೂ ಇತರ ವಿವರಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

News

ಆರ್.ಬಿ.ವೈ.ಎಂ.ನಲ್ಲಿ ರಕ್ತದಾನ ಶಿಬಿರ

23 May 2026

ಬಳ್ಳಾರಿ, ಮೇ.22: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿ (ಆರ್ವೈಎಂಇಸಿ ) ರಕ್ತದಾನ ಶಿಬಿರ ಜರುಗಿತು. ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಜಿಲ್ಲಾ ಆರೋಗ್ಯ ಸಮಾಜಕಲ್ಯಾಣ ಘಟಕ, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಎನ್ ಎಸ್ ಎಸ್ & ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ಐ ಆರ್ ಸಿ ಎಸ್) ಘಟಕಗಳು ಇವರು ಆಯೋಜಿಸಿದ್ದರು.

ಡಾ.ಟಿ.ಗಂಗಾಧರಗೌಡ, ನಿರ್ದೇಶಕರು, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಳ್ಳಾರಿ, ವೀ.ವಿ ಸಂಘದ ಪದಾಧಿಕಾರಿಗಳು ಅಧ್ಯಕ್ಷತೆ ವಹಿಸಿದ್ದರು, ಡಾ.ಕಣೇಕಲ್ ಮಹೇಂತೇಶ ಅಧ್ಯಕ್ಷರು, ಜಾನೆಕುಂಟೆ ಬಸವರಾಜ ವೀ.ವಿ ಸಂಘದ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರು, ಆರ್ ವೈ ಎಂ ಇ ಸಿ, ಬಳ್ಳಾರಿ, ಡಾ. ಅರವಿಂದ ಪಟೇಲ್ ಕಾರ್ಯದರ್ಶಿ, ಯಾಳ್ಪಿ ಮೇಟಿ ಪಂಪನಗೌಡ ಸಹಾಯಕ ಕಾರ್ಯದರ್ಶಿ, ಬೈಲುವದ್ದಿಗೇರಿ ಎರ್ರಿಸ್ವಾಮಿ ಖಜಾಂಚಿ, ಆರ್ ವೈ ಎಂ ಇ ಸಿ ಆಡಳಿತ ಮಂಡಳಿ ಸದಸ್ಯರು - ಪ್ರಭು ಸ್ವಾಮಿ ಎಸ್ ಎಂ, ಬಾಡದ ಪ್ರಕಾಶ್, ಪ್ರಾಚಾರ್ಯ ಡಾ.ಎಚ್.ಮಹಾಬಲೇಶ್ವರ, ಉಪಪ್ರಾಚಾರ್ಯ ಡಾ.ಸವಿತಾ ಸೋನೋಳಿ, ವೀ.ವಿ ಸಂಘದ ಎಂ.ಸಿ.ಸದಸ್ಯರಾದ ಹಚ್ಚೊಳ್ಳಿ ಶರಣಪ್ಪ, ಮುಂಡಾಸದ ಮಲ್ಲಿಕಾರ್ಜುನ, ಆರ್.ವೈ.ಎಂ.ಸಿ ಡೀನ್ಗಳಾದ ಡಾ.ಹನುಮಂತರೆಡ್ಡಿ, ಡಾ.ಕೋರಿ ನಾಗರಾಜ್, ಡಾ.ದೊಡ್ಡಬಸವನಗೌಡ, ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ನರಸಿಂಹಮೂರ್ತಿ, ಆರ್ ವೈ ಎಂ ಇ ಸಿ - ಎನ್ ಎಸ್ ಎಸ್ ತಂಡದ ಸದಸ್ಯರು: ಡಾ.ವಿರೂಪಾಕ್ಷ ಗೌಡ ಎಚ್, ಪ್ರೊ.ಸುರೇಶ್ ಕೆ, ಡಾ.ಸೋಮನಾಥ ಸ್ವಾಮಿ ಆರ್ ಎಚ್ ಎಂ, ಪ್ರೊ.ಎನ್ ಸ್ವಾಮಿ, ಪ್ರೊ.ಎಚ್ ಎಂ ರವಿಕುಮಾರ್, ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿ ಸ್ವಯಂಸೇವಕರು ಭಾಗಿಯಾದರು

ಸುಮಾರು 101 ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ,

News

ಎಪಿಎಂಸಿ ಸರ್ಕಲ್‌ನಿಂದ ಡಿವೈಎಸ್ಪಿ ಕಚೇರಿವರೆಗೆ ರಸ್ತೆ ಅಭಿವೃದ್ಧಿಗೆ ಚಾಲನೆ

23 May 2026

ಬಳ್ಳಾರಿ : ನಗರದ 3ನೇ ವಾರ್ಡ್ ವ್ಯಾಪ್ತಿಯ ಎಪಿಎಂಸಿ ಸರ್ಕಲ್‌ನಿಂದ ಡಿವೈಎಸ್ಪಿ ಕಚೇರಿವರೆಗೆ, ಬೆಂಕಿ ಮಾರೆಮ್ಮ ದೇವಸ್ಥಾನ ಮಾರ್ಗವಾಗಿ ಸಂಪರ್ಕಿಸುವ ಪ್ರಮುಖ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದರು. ಸುಮಾರು ₹4.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ನಗರದ ವೇಗವಾಗಿ ವಿಸ್ತಾರವಾಗುತ್ತಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಎಪಿಎಂಸಿ ಸರ್ಕಲ್‌ನಿಂದ ಡಿವೈಎಸ್ಪಿ ಕಚೇರಿವರೆಗೆ ಸಾಗುವ ಈ ರಸ್ತೆ ವ್ಯಾಪಾರಿಕ ಹಾಗೂ ವಸತಿ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸಂಚಾರ ವ್ಯವಸ್ಥೆ ಸುಗಮವಾಗಲಿದ್ದು, ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.


ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುಣಮಟ್ಟದ ಡಾಂಬರೀಕರಣ, ಒಳಚರಂಡಿ ವ್ಯವಸ್ಥೆ ಸುಧಾರಣೆ, ಅಗತ್ಯವಿರುವ ಕಡೆಗಳಲ್ಲಿ ಪಾದಚಾರಿ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ನಿವಾರಣೆಯಾಗುವ ಜೊತೆಗೆ ವಾಹನ ದಟ್ಟಣೆ ಕೂಡ ಕಡಿಮೆಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎಂ. ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು ಹಾಗೂ ವಾಸು ರೆಡ್ಡಿ ಮಾತನಾಡಿ, ನಗರದ ಅಭಿವೃದ್ಧಿಗೆ ಶಾಸಕ ನಾರಾ ಭರತ್ ರೆಡ್ಡಿ ನಿರಂತರವಾಗಿ ಸ್ಪಂದಿಸುತ್ತಿದ್ದು, ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.


ಈ ವೇಳೆ ಸ್ಥಳೀಯರಾದ ಭರತ್, ಕವಿತಾ, ಕುಮಾರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

News

ಮನೆ ಕುಸಿತ ಸಂತ್ರಸ್ತ ಕುಟುಂಬಕ್ಕೆ ಶಾಸಕ ಬಿ. ನಾಗೇಂದ್ರ ನೆರವು

22 May 2026

ಬಳ್ಳಾರಿ: ನಗರದ ಬಂಡಿಹಟ್ಟಿ ಮುಖ್ಯರಸ್ತೆಯ ಬಂದರ್ ಶಾ ಬಾಬಾ ದರ್ಗಾ ಸಮೀಪ ಭಾರೀ ಮಳೆಯಿಂದ ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ B. Nagendra ಮಾನವೀಯ ನೆರವಿನ ಕೈಚಾಚಿದ್ದಾರೆ.


ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಾರ್ಡ್‌ 30ರಲ್ಲಿರುವ ಮನೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕುಟುಂಬದ ಸದಸ್ಯರು ಭಯಭೀತರಾಗಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ಮನೆ ಕಳೆದುಕೊಂಡ ಕುಟುಂಬ ತಾತ್ಕಾಲಿಕ ಆಶ್ರಯದಲ್ಲಿ ದಿನ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.


ಸಂತ್ರಸ್ತ ಕುಟುಂಬದ ದುಸ್ಥಿತಿಯ ಮಾಹಿತಿ ತಿಳಿದ ತಕ್ಷಣ ಶಾಸಕ ನಾಗೇಂದ್ರ ಅವರು ಸ್ಪಂದಿಸಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಇತರ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ ಅವರ ಪರವಾಗಿ ಬೆಂಬಲಿಗರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಚೆಕ್ ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದಬೆಂಬಲಿಗರು, “ಮಳೆ ಹಾನಿಯಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಶಾಸಕ ನಾಗೇಂದ್ರ ಅವರು ಸದಾ ಸ್ಪಂದಿಸುತ್ತಾರೆ. ಸಂತ್ರಸ್ತ ಕುಟುಂಬಕ್ಕೆ ತುರ್ತು ನೆರವು ಒದಗಿಸುವ ಉದ್ದೇಶದಿಂದ ಆರ್ಥಿಕ ಸಹಾಯ ನೀಡಲಾಗಿದೆ” ಎಂದು ಹೇಳಿದರು.


ಸ್ಥಳೀಯ ನಿವಾಸಿಗಳು ಕೂಡ ಶಾಸಕ ನಾಗೇಂದ್ರ ಅವರ ನೆರವಿನ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. “ಮನೆ ಕುಸಿತದಿಂದ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿತ್ತು. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಪಂದಿಸಿರುವುದು ಧೈರ್ಯ ತುಂಬುವ ಕೆಲಸವಾಗಿದೆ” ಎಂದು ಹೇಳಿದರು.


ಮಳೆ ಹಾನಿಯಿಂದ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ಹಾನಿಯಾಗಿರುವುದರಿಂದ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮತ್ತಷ್ಟು ಪರಿಹಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

News

ಬಳ್ಳಾರಿಯಲ್ಲಿ ಆರ್ಭಟಿಸಿದ ಮಳೆ: ಒಂದೇ ದಿನ 6 ಸೆಂ.ಮೀ ವರ್ಷಧಾರೆ, ಜನಜೀವನ ಅಸ್ತವ್ಯಸ್ತ

22 May 2026

ಬಳ್ಳಾರಿ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಗಣಿನಾಡು ಬಳ್ಳಾರಿ ಜಿಲ್ಲೆಗೆ ಮಂಗಳವಾರ ಸುರಿದ ಭಾರೀ ಮಳೆ ತಂಪು ನೀಡಿದರೂ, ಅದರ ಅಬ್ಬರ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತು. ಬಳ್ಳಾರಿ ನಗರದಲ್ಲಿ ಒಂದೇ ದಿನ 6.01 ಸೆಂಟಿಮೀಟರ್ ಮಳೆಯಾಗಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಳ್ಳಾರಿ ಘಟಕ ಮಾಹಿತಿ ನೀಡಿದೆ. ಈ ಮಳೆ ಈ ವರ್ಷದ ಅತಿದೊಡ್ಡ ವರ್ಷಧಾರೆಯೆಂದು ಪರಿಗಣಿಸಲಾಗುತ್ತಿದೆ.


ಮಧ್ಯಾಹ್ನದ ವೇಳೆಗೆ ಆರಂಭವಾದ ಮಳೆ, ಗುಡುಗು–ಸಿಡಿಲಿನೊಂದಿಗೆ ಸುರಿದ ಪರಿಣಾಮ ನಗರದೆಲ್ಲೆಡೆ ರಸ್ತೆಗಳಲ್ಲಿ ನೀರು ಹರಿದು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಮಂದಿ ರಾತ್ರಿಯಿಡೀ ಆತಂಕದಲ್ಲಿ ಕಾಲ ಕಳೆಯಬೇಕಾಯಿತು.


ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಯೂ ಮಳೆಯ ದಾಖಲೆ ಕಂಡುಬಂದಿದೆ. ಬಳ್ಳಾರಿ ತಾಲ್ಲೂಕಿನಲ್ಲಿ 1.93 ಸೆಂ.ಮೀ, ಸಂಡೂರಿನಲ್ಲಿ 0.2, ಕಂಪ್ಲಿಯಲ್ಲಿ 0.15, ಸಿರುಗುಪ್ಪದಲ್ಲಿ 0.1 ಹಾಗೂ ಕುರುಗೋಡಿನಲ್ಲಿ 0.18 ಸೆಂ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 1.96 ಸೆಂ.ಮೀ ವರ್ಷಧಾರೆ ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


22 ಬಾರಿ ಸಿಡಿಲು, ಜನರಲ್ಲಿ ಆತಂಕ


ಮಂಗಳವಾರ ಮಧ್ಯಾಹ್ನ 2.45ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 22 ಬಾರಿ ಸಿಡಿಲು ಬಿದ್ದಿರುವುದಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಗುಡುಗು–ಮಿಂಚಿನ ಭಾರೀ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದು, ಹಲವೆಡೆ ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಬಗ್ಗೆ ದೂರುಗಳು ಕೇಳಿಬಂದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ವಿದ್ಯುತ್ ವ್ಯವಸ್ಥೆ ಸಂಪೂರ್ಣ ಕುಸಿತ


ಭಾರೀ ಗಾಳಿ ಹಾಗೂ ಮಳೆಯಿಂದಾಗಿ ನಗರದ ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. 75ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, 12 ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿವೆ. ಸುಮಾರು 2 ಕಿಲೋಮೀಟರ್ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ಅಲ್ಲದೆ 128ಕ್ಕೂ ಅಧಿಕ ಮರಗಳು ಧರೆಗುರುಳಿರುವುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.


ಇದರಿಂದ ನಗರದ ಅನೇಕ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಹಲವೆಡೆ ಇಡೀ ರಾತ್ರಿ ಕರೆಂಟ್ ಇಲ್ಲದೆ ಜನರು ಕತ್ತಲಲ್ಲಿ ಕಾಲ ಕಳೆಯಬೇಕಾಯಿತು. ಬೇಸಿಗೆಯ ಉರಿ ನಡುವೆಯೇ ವಿದ್ಯುತ್ ಇಲ್ಲದ ಕಾರಣ ಮಕ್ಕಳು, ವೃದ್ಧರು ಹಾಗೂ ರೋಗಿಗಳು ಹೆಚ್ಚಿನ ಸಂಕಷ್ಟ ಅನುಭವಿಸಿದರು.


ಜೆಸ್ಕಾಂ ಕಚೇರಿಗಳಿಗೆ ನಿರಂತರ ದೂರುಗಳು ಹರಿದುಬಂದ ಹಿನ್ನೆಲೆ ಸಿಬ್ಬಂದಿ ರಾತ್ರಿಯಿಡೀ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಮಾತನಾಡಿದ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುಸೇನ್ ಸಾಬ್,

“ಈಗಾಗಲೇ 3 ಪರಿವರ್ತಕಗಳನ್ನು ಬದಲಿಸಲಾಗಿದೆ. ಕ್ರೇನ್‌ಗಳನ್ನು ಬಾಡಿಗೆ ಪಡೆದು ಇನ್ನೂ 15 ಟ್ರಾನ್ಸ್ಫಾರ್ಮರ್‌ಗಳ ದುರಸ್ತಿ ಹಾಗೂ ಬದಲಾವಣೆ ಕಾರ್ಯ ನಡೆಯುತ್ತಿದೆ. ಬುಧವಾರ ರಾತ್ರಿ ವೇಳೆಗೆ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸರಬರಾಜು ಸಾಮಾನ್ಯ ಸ್ಥಿತಿಗೆ ಬರಲಿದೆ” ಎಂದು ತಿಳಿಸಿದರು.


ಮನೆಗಳಿಗೆ ಹಾನಿ, ಜನರ ಆತಂಕ


ಬಿರುಗಾಳಿಯ ತೀವ್ರತೆಗೆ ಸಂಡೂರು ತಾಲ್ಲೂಕಿನಲ್ಲಿ ಒಂದು ಮನೆಯ ಚಾವಣಿ ಹಾರಿ ಹೋಗಿದೆ. ಬಳ್ಳಾರಿ ನಗರದಲ್ಲಿಯೂ ಎರಡು ಮನೆಗಳಿಗೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ನಿಖರ ಹಾನಿಯ ಅಂದಾಜು ಇನ್ನಷ್ಟೇ ಸಿಗಬೇಕಿದೆ. ಹಲವೆಡೆ ಮರಗಳು ಮನೆಗಳ ಮೇಲೆಯೇ ಬಿದ್ದ ಪರಿಣಾಮ ನಿವಾಸಿಗಳು ಭೀತಿಗೊಳಗಾದರು.


ಸರ್ಕಾರಿ ಕಚೇರಿಗಳಿಗೂ ನೀರು ನುಗ್ಗಿತು


ಮಳೆಯ ನೀರು ಕೇವಲ ಮನೆಗಳಿಗೆ ಮಾತ್ರವಲ್ಲದೆ ಕೆಲವು ಸರ್ಕಾರಿ ಕಚೇರಿಗಳಿಗೂ ನುಗ್ಗಿ ಕಡತಗಳು ಹಾನಿಗೊಳಗಾಗಿವೆ. ಮಳೆ ನೀರು ಹೊರಹಾಕುವ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಹಲವು ಕಚೇರಿಗಳ ಕೊಠಡಿಗಳು ಕೆರೆಯಂತಾಗಿದ್ದವು. ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಟ್ಟರು.


ತೋಟಗಾರಿಕೆ ಬೆಳೆಗಳಿಗೆ ಹಾನಿ


ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ವಿಶೇಷವಾಗಿ ಬಾಳೆ, ಪಪ್ಪಾಯಿ ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ.


ಈ ಕುರಿತು ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಕಾಂತ ಕೋಟೆಮನೆ,

“ಮಳೆಯಿಂದಾದ ಹಾನಿಯ ಸರ್ವೆ ಕಾರ್ಯ ಆರಂಭವಾಗಿದೆ. ಮುಂದಿನ ಎರಡು ದಿನಗಳಲ್ಲಿ ಸಂಪೂರ್ಣ ವರದಿ ಸಿಗಲಿದೆ. ಹಾನಿಗೊಳಗಾದ ರೈತರಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು” ಎಂದು ಹೇಳಿದರು.


ಒಳಚರಂಡಿ ಸಮಸ್ಯೆ ಮತ್ತೆ ಬಯಲು


ಈ ಭಾರೀ ಮಳೆಯಿಂದ ನಗರದ ಒಳಚರಂಡಿ ಹಾಗೂ ಮಳೆನೀರು ನಿರ್ವಹಣಾ ವ್ಯವಸ್ಥೆಯ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ಹಲವೆಡೆ ರಸ್ತೆಗಳು ಕೆರೆಗಳಂತಾಗಿದ್ದು, ವಾಹನ ಸವಾರರು ಪರದಾಡಿದರು. ಪ್ರಮುಖ ರಸ್ತೆಗಳಲ್ಲೇ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು. ನಾಗರಿಕರು ನಗರಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ


ಮುಂದಿನ ಕೆಲ ದಿನಗಳ ಕಾಲ ಜಿಲ್ಲೆಯಲ್ಲಿ ಗುಡುಗು–ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅನಗತ್ಯವಾಗಿ ಹೊರಗೆ ಓಡಾಡಬಾರದು, ಮರಗಳ ಕೆಳಗೆ ನಿಲ್ಲಬಾರದು ಹಾಗೂ ವಿದ್ಯುತ್ ಕಂಬಗಳಿಂದ ದೂರವಿರಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

News

*ಡಿಎಂಜಿ ಅಧಿಕಾರಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಹುಲಿಯಪ್ಪ ಆಕ್ರೋಶ*

21 May 2026

ಬಳ್ಳಾರಿ, ಮೇ.20: ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ದಂಧೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಕೊಳಗಲ್ ಹುಲಿಯಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ಘಟನೆಯ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದಂಧೆಕೋರರ ಸಂಚು ಇದೆ ಎಂದು ಆರೋಪಿಸಲಾಗಿದೆ.


ಗ್ರಾಮದಲ್ಲಿ ಸರ್ಕಾರಿ ಜಾಗದಿಂದ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಡಿಎಂಜಿ ಅಧಿಕಾರಿ ನವೀನ್ ಅವರು ಯಾವುದೇ ಪೊಲೀಸ್ ಭದ್ರತೆ ಅಥವಾ ಸಂಬಂಧಿತ ಅಧಿಕಾರಿಗಳನ್ನು ಕರೆದುಕೊಳ್ಳದೆ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಹುಲಿಯಪ್ಪ ಅವರನ್ನು ರಾತ್ರಿ ವೇಳೆ ಸ್ಥಳಕ್ಕೆ ಕರೆದುಕೊಂಡು ಹೋದರು ಎನ್ನಲಾಗಿದೆ.


ಸ್ಥಳಕ್ಕೆ ತೆರಳಿದ ವೇಳೆ ಅಕ್ರಮ ಮಣ್ಣು ಸಾಗಾಟವನ್ನು ಕಂಡ ಹುಲಿಯಪ್ಪ ಅವರು “ಇದು ಕಾನೂನುಬಾಹಿರ, ಕೂಡಲೇ ನಿಲ್ಲಿಸಬೇಕು” ಎಂದು ಪ್ರಶ್ನಿಸಿದ ಸಂದರ್ಭದಲ್ಲಿ, ಅಲ್ಲಿದ್ದ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಡಿಎಂಜಿ ಅಧಿಕಾರಿ ನವೀನ್ ಅವರ ಸಮ್ಮುಖದಲ್ಲೇ ನಡೆದಿತ್ತೆಂದು ಹುಲಿಯಪ್ಪ ಹೇಳಿದ್ದಾರೆ.


ಹಲ್ಲೆ ನಡೆದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ಹುಲಿಯಪ್ಪ ಅವರನ್ನು ಅಲ್ಲಿದ್ದ ಸರ್ಕಾರಿ ವಾಹನದಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಹುಲಿಯಪ್ಪ, “ನನ್ನನ್ನು ಸ್ಥಳಕ್ಕೆ ಕರೆದುಕೊಂಡು ಹೋದ ಡಿಎಂಜಿ ನವೀನ್ ಅವರೇ ಘಟನೆಯ ನೈತಿಕ ಹೊಣೆ ಹೊತ್ತಿರಬೇಕು. ಮೇಲಾಧಿಕಾರಿಗಳಿಗೂ ಮಾಹಿತಿ ನೀಡದೇ, ಪೊಲೀಸ್ ಭದ್ರತೆ ಇಲ್ಲದೇ ಸ್ಥಳಕ್ಕೆ ಕರೆದುಕೊಂಡು ಹೋಗಿರುವುದು ಗಂಭೀರ ನಿರ್ಲಕ್ಷ್ಯ” ಎಂದು ಆರೋಪಿಸಿದ್ದಾರೆ.


ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ನರಸಿಂಹ, ಗೋಪಾಲ, ಅನಿಲ್, ವೀರೇಶ್, ಹುಲುಗ, ಬುಡ್ಡಪ್ಪ, ದೊಡ್ಡಿ, ಅಶೋಕ ಸೇರಿದಂತೆ ಸುಮಾರು 15 ಮಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಲಿಯಪ್ಪ ಒತ್ತಾಯಿಸಿದ್ದಾರೆ. ಜೊತೆಗೆ ಡಿಎಂಜಿ ಅಧಿಕಾರಿ ನವೀನ್ ಅವರ ಪಾತ್ರದ ಮೇಲೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.


ಸರ್ಕಾರಿ ಭೂಮಿಯಲ್ಲಿ ಅಕ್ರಮ ಮಣ್ಣು ದಂಧೆ ನಡೆಯುತ್ತಿದ್ದರೂ ಇದುವರೆಗೆ ಪ್ರಮುಖ ಆರೋಪಿಗಳನ್ನು ಬಂಧಿಸದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

News

ಶ್ರೀರಾಮರಂಗಾಪುರ ದಲಿತ ಕುಟುಂಬಗಳಿಗೆ ವಸತಿ ನಿವೇಶನಕ್ಕೆ ಆಗ್ರಹ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ

20 May 2026

ಬಳ್ಳಾರಿ, ಮೇ 20-: ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರ ಗ್ರಾಮದ 101 ದಲಿತ ಕುಟುಂಬಗಳಿಗೆ ಶೀಘ್ರ ವಸತಿ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

2014-15ನೇ ಸಾಲಿನಲ್ಲಿ ಗ್ರಾಮದ ಭೀಮನೇನಿ ಸೋಮಪ್ಪ ಅವರ ವಶದಲ್ಲಿದ್ದ 135 ಎಕರೆ ಜಮೀನನ್ನು ಹೋರಾಟದ ಮೂಲಕ ಕಂದಾಯ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಗ್ರಾಮದಲ್ಲಿನ ದಲಿತ ಸಮುದಾಯ ಆರ್ಥಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಸರ್ಕಾರದಿಂದ ಆರ್ಥಿಕ ಭದ್ರತೆ, ನೇರ ಸಾಲ ಹಾಗೂ ವಸತಿ ನಿವೇಶನ ನೀಡುವಂತೆ ಬೇಡಿಕೆ ಇಡಲಾಗಿತ್ತು ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಈ ಹಿಂದೆ ಆದಿ ಜಾಂಬವ ನಿಗಮದಿಂದ 86 ಕುಟುಂಬಗಳಿಗೆ ತಲಾ ₹1 ಲಕ್ಷ ನೇರ ಸಾಲ ಮಂಜೂರಾಗಿದ್ದರೂ, ವಸತಿ ನಿವೇಶನ ಮಂಜೂರಿನ ವಿಚಾರದಲ್ಲಿ ಇದುವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಹಲವಾರು ಕುಟುಂಬಗಳು ಒಂದೇ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ವಾಸಿಸಲು ಸೂಕ್ತ ಜಾಗದ ಕೊರತೆಯಿಂದ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ಗ್ರಾಮಸ್ಥರು ಡಾ. ಗುರುಮೂರ್ತಿ ಅವರ ಜಮೀನನ್ನು ವಸತಿ ನಿವೇಶನಕ್ಕಾಗಿ ಖರೀದಿಸಲು ಮಾತುಕತೆ ನಡೆಸಿದ್ದು, ಸುಮಾರು 3 ಎಕರೆ 94 ಸೆಂಟ್ಸ್ ಭೂಮಿಗೆ ₹2.56 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

ಇಷ್ಟೊಂದು ಮೊತ್ತವನ್ನು ಬಡ ಕುಟುಂಬಗಳು ಭರಿಸಲು ಸಾಧ್ಯವಿಲ್ಲದ ಕಾರಣ ಸರ್ಕಾರವೇ ಮಧ್ಯಪ್ರವೇಶಿಸಿ ನಿವೇಶನ ಮಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿ ಶೀಘ್ರ ವಸತಿ ನಿವೇಶನ ಮಂಜೂರು ಮಾಡಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ, ನೀಲಪ್ಪ ಪೇಂಟರ್, ಸೋಮಯ್ಯ, ಈರಣ್ಣ, ವೆಂಕಟಸ್ವಾಮಿ, ಕೃಷ್ಣ, ಪೆದ್ದಣ್ಣ, ಮೋಹನ್ ರಾಜ್, ನವೀನ್ ಕುಮಾರ್, ಮಲ್ಲಮ್ಮ, ಲಕ್ಷ್ಮಿ, ಸರಸ್ವತಿ, ಸರೋಜಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

News

ಹೊಸಳ್ಳಿ ಹಸು ಸಾವು ಪರಿಹಾರಕ್ಕೆ ಆಗ್ರಹ

17 May 2026

ಬಳ್ಳಾರಿ:ಮೇ.17- ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಸು ಮೃತಪಟ್ಟಿದ್ದು, ಅದರ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶರಣಬಸವ ಅವರು ಜಿಲ್ಲಾ ಪಶು ವೈದ್ಯಾಧಿಕಾರಿ ಸದಾಶಿವ ಉಪ್ಪಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. .

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬಗ್ಗೂರು ಗ್ರಾಮದ ರೈತ ಮಲ್ಕಪ್ಪ ಅವರಿಗೆ ಸೇರಿದ ಹಸು, ಎಮ್ಮೆ, ಕರುವಿಗೆ ಹೀಟ್ ಸ್ಟೋಕ್ ಆಗಿತ್ತು. ರಾರಾವಿ ಪಶು ವೈದ್ಯಕೀಯ ಆಸ್ಪತ್ರೆಗೆ ಬೀಗ ಹಾಕಿತ್ತು. ಗ್ರಾಮ ಮತ್ತು ತಾಲ್ಲೂಕು ಪಶು ವೈದ್ಯಾಧಿಕಾರಿಗೆ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಸು ಮೃತಪಟ್ಟಿದೆ.1962 ಸಹಾಯವಾಣಿಗೆ ಕರೆ ಮಾಡಿದರೆ, ವಾಹನ ರಿಪೇರಿ ಇದೆ ಎಂದರು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.

News

ಸಿಡಿಲು ಬಡಿದು ದಾಸರ ನಾಗೆನಹಳ್ಳಿ ಯುವಕ ಸಾವು

16 May 2026

ಬಳ್ಳಾರಿ, ಮೇ 16: ಜಿಲ್ಲೆಯ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸುರಿದ ಮಳೆಗೆ ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಗ್ರಾಮದ ಕೊರಿ ಗಾದಿಲಿಂಗಪ್ಪ (32) ಎಂದು ಗುರುತಿಸಲಾಗಿದೆ.


ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಗ್ರಾಮದಲ್ಲಿ ಏಕಾಏಕಿ ಮಳೆ ಆರಂಭವಾಗಿತ್ತು. ಈ ವೇಳೆ ತಮ್ಮ ಹೊಲದಲ್ಲಿರುವ ಸಪೋಟ ಹಣ್ಣು ಹರಿಯಲು ಗಾದಿಲಿಂಗಪ್ಪ ತೆರಳಿದ್ದರು. ಮಳೆಯ ನಡುವೆಯೇ ಸಿಡಿಲು ಬಡಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಮೃತ ಗಾದಿಲಿಂಗಪ್ಪ ದಾಸರ ನಾಗೇನಹಳ್ಳಿ ಗ್ರಾಮದ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ನಿತ್ಯ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಅವರ ನಿಧನದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.


ಗಾದಿಲಿಂಗಪ್ಪ ಅವರಿಗೆ ಪತ್ನಿ ಮಂಜಮ್ಮ, ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಇದ್ದಾರೆ. ಮೃತರ ತಂದೆ ಮಲ್ಲೇಶ್ ಎಂದು ತಿಳಿದು ಬಂದಿದೆ.


ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಳೆಗಾಲ ಆರಂಭವಾಗುತ್ತಿದ್ದಂತೆ ಸಿಡಿಲಿನ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.


ಈ ಘಟನೆ ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.